
ನಮ್ಮ ಗುರುಗಳು

ಸಮರ್ಥ ಸದ್ಗುರುಗಳಾದ ಮಹಾತ್ಮ ಶ್ರೀ ರಾಮಚಂದ್ರಜಿ ಮಹಾರಾಜರು [ಬಾಬೂಜಿಯವರು]
ಷಾಜಹಾನ್‌ಪುರ್ (ಉ.ಪ್ರ.)
ನಮ್ಮ ಗುರುಗಳಾದ ಶ್ರೀ ರಾಮಚಂದ್ರಜಿ ಮಹಾರಜರು 1899 ಏಪ್ರಿಲ್ 30 ಭಾನುವಾರ ಬೆಳಿಗ್ಗೆ 07.26 ಗಂಟೆಗೆ (ವಿಕ್ರಮ್ ಸಂವತ್ 1856, ಸಾಕಾ ಶಕ 1821, ಬೈಸಾಖ್ ಬಡಿ ಪಂಚಮಿ ಸಮಯ 4 ಗರಿ 55 ಫಲ್) ಭಾರತ ದೇಶದ ಷಾಹಜಹಾನ್‌ಪುರ್ (ಉ.ಪ್ರ.) ದಲ್ಲಿ ಜನ್ಮಿಸಿದರು.
ಭಾರತ ದೇಶದ ಉತ್ತರ ಪ್ರದೇಶ ರಾಜ್ಯದಲ್ಲಿರುವ ಷಾಜಹಾನ್‌ಪುರ್ ನಗರವು ಅವರ ಜನ್ಮಸ್ಥಾನವಾಗಿ, ಪರಮಪಾವನವಾಯಿತು. ಅವರು ಕಾಯಸ್ಥ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ಕುಟುಂಬಕ್ಕೆ, ಪ್ರಸಿದ್ಧವಾದ ಮೊಘಲ್ ಚಕ್ರವರ್ತಿ ಕಾಲಕ್ಕೆ ಸಲ್ಲಿದ ದೊಡ್ಡ ಚಾರಿತ್ರಿಕ ಹಿನ್ನಲೆ ಇರುವುದು.
ಬಾಬೂಜಿಯವರ, ಗೌರವಾನ್ವಿತರಾದ ತಂದೆಯವರಾದ ಶ್ರೀ ಬದ್ರಿಪ್ರಸಾದ್ 1867 ಜುಲೈ 12 ರ೦ದು ಬುಡಾನ್ನಲ್ಲಿ ಜನ್ಮಿಸಿದರು. ಅವರು ವಿದ್ಯಾಭ್ಯಾಸ ಮುಗಿದ ನಂತರ, 1892 ರಲ್ಲಿ ಷಾಜಹಾನ್‌ಪುರದಲ್ಲಿ ನ್ಯಾಯವಾದಿಯಾಗಿ ಕೆಲಸವನ್ನಾರಂಭಿಸಿದರು. ಶ್ರೀಘ್ರದಲ್ಲಿಯೇ ಅವರು ಅವರ ಸಮಯದಲ್ಲಿನ ಪ್ರಮುಖ ನ್ಯಾಯವಾದಿಗಳಾದರು. ನಂತರ ಖ್ಯಾತಿಹೊಂದಿದರು. ಅಷ್ಟೇ ಅಲ್ಲದೆ ಅವರು ಮೊದಲ ದರ್ಜೆಯ ಪ್ರತ್ಯೇಕ ಮ್ಯಾಜಿಸ್ಟ್ರೇಟ್‌ರಾಗಿ ನಿಯಮಿಸಲ್ಪಟ್ಟರು. ಅವರು ದೊಡ್ಡ ಚಾರಿತ್ರ್ಯಚಿಂತಕರಾಗಿದ್ದರು. ಅವರು ಪರಿಶೋಧನೆ ಮಾಡಿ ಉರ್ದುವಿನಲ್ಲಿ ಸನಾತನ ಹಿಂದು ಚರಿತ್ರೆಯ ಕುರಿತು ಬರೆದ ‘ಮುಷ್ರಫ್-ಉಲ್-ತಾರಿಖ್ ಹಿಂದ್’ ವ್ಯಾಖ್ಯಾನವು ಬರವಣಿಗೆ ರೂಪದಲ್ಲಿದ್ದು, ಬಹಳ ಅಪರೂಪದ ಮೌಲ್ಯವಾಗಿದೆ. ಅಷ್ಟೆ ಅಲ್ಲದೆ ಉರ್ದು ಭಾಷೆಯಲ್ಲಿ ಬರೆದ ಶ್ರೀಕೃಷ್ಣನ ವಂಶದ ಮೇಲಿನ ವ್ಯಾಖ್ಯಾನವು ಪ್ರಚುರಣಗೊಳ್ಳದಿದ್ದರು ಬಹು ಮೌಲ್ಯವಾಗಿದೆ.
ಬಾಬೂಜಿ ಮಹಾರಾಜರ ತಾಯಿ ನಿಷ್ಟಾವಂತೆಯಾಗಿದ್ದು ಯಾವಾಗಲೂ ದೇವರಿಗೆ ಅಂಕಿತವಾಗಿದ್ದರು. ಅವರು ಬಾಬೂಜಿ ಮಹಾರಾಜರ ಜೀವನದಲ್ಲಿ ಪ್ರತಿ ಹಂತದಲ್ಲಿ ಹೇಳಿಕೊಟ್ಟಿರುವ ಪಾಠ ‘ಪ್ರಾಮಾಣಿಕನಾಗಿರು, ಕಳವು ಮಾಡದಿರು’ ಎನ್ನುವುದು. ಅವರ ಶಿಕ್ಷಣದ ಪರಿಣಾಮವು ಏನೆ೦ದರೆ, ಈ ಮಾತು ಅವರ ಜೀವನದ ಅವಿಭಾಜ್ಯಅಂಗವಾಯಿತು.
ಚಿಕ್ಕಂದಿನಿಂದಲು ಅವರು ಪೂಜೆ (ಆರಾಧನೆ) ಮಾಡುವುದಕ್ಕೆ ಆಸಕ್ತಿವಹಿಸುತ್ತಿದ್ದರು. ಹಾಗೂ ಅವರು ತಮ್ಮ ಒಂಬತ್ತು ವರ್ಷದ ವಯಸ್ಸಿನಿಂದಲೆ ಸತ್ಯಾನ್ವೇಷಣೆಯಲ್ಲಿ ತೀರದ ತಳಮಳ, ಉತ್ಕಂಠೆಯನ್ನು ಹುಟ್ಟಿಸಿಕೊಂಡಿದ್ದರು. ಅವರ ಸ್ಥಿತಿ ಈ ನಿಟ್ಟಿನಲ್ಲಿ ಹೇಗಿತ್ತೆಂದರೆ ನೀರಿನಲ್ಲಿ ಮುಳಿಗಿದ ವ್ಯಕ್ತಿಯು ಉಸಿರಾಡದೆ ಚಡಪಡಿಸುವಂತಿತ್ತು. ಆಗ ಅವರು ಭಗವದ್ಗೀತೆಯನ್ನು ಓದಿದರು ಆದರೆ ಅದು ಅವರು ಪರಿತಪಿಸುತ್ತಿರುವ ಸ್ಥಿತಿಯ ಅನುಭವವನ್ನು ನೀಡಲಿಲ್ಲ.
ಹದ್ನಾಲ್ಕನೇ ವಯಸ್ಸಿನಲ್ಲಿ ಅವರು, ಯಾರದ್ದಾದರು ಬೆವರಿನ ವಾಸನೆಯ ಮೂಲಕ ಅವರ ಗುಣವನ್ನು, ನಡವಳಿಕೆಯನ್ನು ತಿಳಿದುಕೊಳ್ಳುತ್ತಿದ್ದರು. ಹದಿನೈದು, ಹದಿನಾರನೆಯ ವಯಸ್ಸಿನಲ್ಲಿ ಅವರು ತತ್ವಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಂಡರಲ್ಲದೆ ‘ಮಿಲ್ಸ್ ಯುಟಿಲಿಟೇರಿಯನಿಜಂ’ ನಂಥಹ ತಾತ್ವಿಕ ಪುಸ್ತಕಗಳನ್ನು ಓದಿದರು. ಅವರು ಸತ್ಯಾನ್ವೇಷಣೆಯ ಹಾದಿಯಲ್ಲಿ ಎಲ್ಲ ಪುಸ್ತಕಗಳನ್ನು ಬದಿಗಿಟ್ಟು ತಮ್ಮ ಸ್ವಂತ ವಿಚಾರಗಳನ್ನು ಬೆಳೆಸಿಕೊಂಡರು.
ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಅವರು ಒಳ್ಳೆಯ ಹಾಕಿ ಆಟಗಾರರಾಗಿದ್ದು, ತರಗತಿಯ ತಂಡಕ್ಕೆ ನಾಯಕರಾಗಿದ್ದರು. ಉಪಾಧ್ಯಾರು ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಅಲ್ಲದೆ ಅವಶ್ಯಕತೆಯಿದ್ದಲ್ಲಿ ಅವರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಿದ್ದರು. ಅವರು ತಮ್ಮ ಬಾಲ್ಯದಲ್ಲಿ ಕೆಲವು ವಿಷಯಗಳ ಬಗ್ಗೆ ಭವಿಷ್ಯ ಹೇಳುತಿದ್ದರು. ಅವು ನಿಜವಾಗುತ್ತಿದ್ದವು.
ಅವರು ತಮ್ಮ ಹತ್ತೊಂಬತ್ತನೆ ವಯಸ್ಸಿನಲ್ಲಿ ಮಥುರದಲ್ಲಿ ಭಗವತಿ ಎನ್ನುವ ಕನ್ಯೆಯನ್ನು ಮದುವೆಯಾದರು. ಆದರೆ ಆಕೆ 1949 ರ ಕಡೆಯಲ್ಲಿ ಮರಣಿಸಿದರು.
ಬಾಬೂಜಿ ಮಹಾರಾಜರು 1922 ಜೂನ್ 3 ತಾರೀಖು ತಮ್ಮನ್ನು ಸಮರ್ಥ ಗುರುಗಳಾದ ಮಹಾತ್ಮ ಶ್ರೀ ರಾಮಚಂದ್ರಜಿ ಮಹಾರಾಜರ (ಫಥೆಘರ್, ಉ.ಪ್ರ.) ಚರಣಕಮಲಗಳಿಗೆ ಸಮರ್ಪಿಸಿಕೊಂಡರು. ಅವರು ಎಸ್.ಎಸ್.ಎಲ್.ಸಿ. ಹಾಗು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಹೃದಯಪೂರ್ವಕವಾಗಿ ಧ್ಯಾನ ಪದ್ಧತಿಯನ್ನು ಪ್ರಾರಂಬಿಸಿದರು. ಹಾಗು ಅವರು ಅತ್ಯಂತ ಭಕ್ತಿ ಪ್ರೀತಿಯಿಂದ ಸಾಧನೆಯನ್ನು ಮಾಡಿದರು. ಅವರಿಗಿರುವ ಅಪಾರವಾದ ವಿಶ್ವಾಸ ಹಾಗು ಗುರುಗಳಲ್ಲಿ ಲಯಾವಸ್ಥೆ ಹೊಂದಬೇಕೆಂಬ ದೃಢವಾದ ಸಂಕಲ್ಪ, ಅವರಿಗೆ ಆಧ್ಯಾತ್ಮದ, ವಿವಿಧ ಹಂತಗಳನ್ನು ದಾಟಲು ಮತ್ತು ಅನ೦ತ ಸಾಗರದಲ್ಲಿ ಈಜಲು ಅವರ ಗುರುಗಳ ಕೃಪೆಗೆ ಪಾತ್ರರನ್ನಾಗಿಸಿತು.
ಆಗಸ್ಟು 15, 1931 ರ ಬೆಳಿಗ್ಗೆ ಅವರು ತಮ್ಮ ಒಳಗೂ ಹಾಗೂ ಹೊರಗೂ ದಿವ್ಯಶಕ್ತಿಯನ್ನನುಭವಿಸಿದರು. ಇದೆಲ್ಲವೂ ಅವರ ಗುರುಗಳಿಂದಲೆ ದಯಪಾಲಿಸಲಾಯಿತೆಂದು ಅವರ ಅಂತರ್ವಾಣಿ ಅವರಿಗೆ ಆಶ್ವಾಸನೆ ನೀಡಿತು. ಅವರ ಗುರುಗಳು (ಲಾಲಾಜಿ ಮಹಾರಾಜರು) 1931 ಆಗಸ್ಟು 14 ರಾತ್ರಿ ಮಹಾಸಮಾಧಿಯನ್ನು ಹೊಂದಿದರು.
ಬಾಬೂಜಿಯವರಿಗೆ ಅವರ ಗುರುಗಳ ಹೊರತು ಬೇರೆ ದೇವರಿಲ್ಲ. ಅವರು ಎಲ್ಲ ಇತರ ವಿಷಯಗಳಿಗೆ ಸಂಬಂಧವಿಲ್ಲದಂತೆ ಕೇವಲ ಗುರುವೇ ಎಂಬ ಭಾವನೆ ಇಂದ ಮುಂದೆ ಸಾಗಿದರು. ಅವರ ಗುರುಗಳೀಮರ್ತ್ಯ ಲೋಕವನ್ನಗಲಿದರು. ಆಗ ಅವರು ಬಾಬೂಜಿಯವರ ಕನಸಿನಲ್ಲಿ ಬಂದು, ಈ ಕೆಳಗಿನ ಮಾತುಗಳನ್ನು, ಅವರ ಪ್ರಸ್ತುತ ಸ್ಥಿತಿಯಾಗಿ ವಿವರಿಸಿದರು.
“ನಾನು-ನೀನಾದೆ, ನೀನು-ನಾನಾದೆ. ನಾನು-ನೀನಲ್ಲವೆಂದು, ನೀನು-ನಾನಲ್ಲವೆಂದು ಯಾರು ಹೇಳಬಲ್ಲರು.’’
ಬಾಬೂಜಿಯವರು ತಮ್ಮ ಗುರುಗಳು ಪ್ರವೇಶಪಡಿಸಿದ್ದ, ರಾಜಯೋಗ ಸಾಧನ ಪದ್ಧತಿಯನ್ನ್ನು ಮೆರಗುಗೊಳಿಸಿ, ಇದನ್ನು ‘ಸಹಜಮಾರ್ಗ’ ವೆಂದು ಹೆಸರಿಟ್ಟರು. ಈಗ ಈ ಸಹಜಮಾರ್ಗ ಸಾಧನ ಪದ್ಧತಿಯಲ್ಲಿ, ಸತ್ಯವಸ್ತುವನ್ನು ಪ್ರಾಪ್ತಿಹೊಂದಲು ಸುಲಭವಾದ ಹಾಗೂ ಸಹಜವಾದ ಮಾರ್ಗವನ್ನು ಅನುಸರಿಸಲಾಗುವುದು.
ಮಾನವನ ಸಾಧಾರಣ ಜೀವನದಲ್ಲಿ ಆಚರಿಸಲು ಕಷ್ಟತರವಾದ ಸ್ಥೂಲವಾದ ಅಪಕ್ವಪದ್ಧತಿಗಳನ್ನು ಸಹಜಮಾರ್ಗವು ಪಾಲಿಸುವಂತೆ ಸಲಹೆ ನೀಡುವುದಿಲ್ಲ. ಸಹಜಮಾರ್ಗದ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ಇಂದ್ರಿಯಗಳ ಕೆಲಸ ಕಾರ್ಯಗಳನ್ನು ಸಹಜವಾದ ರೀತಿಯಲ್ಲಿ ನಿಯಂತ್ರಿಸಲಾಗುವುದು. ತನ್ಮೂಲಕ ಸಾಧಕರಿಗೆ (ಅಭ್ಯಾಸಿಗಳಿಗೆ) ಅವರ ನಿಜಸ್ಥಿತಿ (ಸತ್ಯಸ್ಥಿತಿ) ಗೆ ತಲುಪಿಸಲಾಗುವುದು. ಅಂದರೆ ಮೊದಲಬಾರಿ ಮಾನವ ರೂಪವನ್ನು ತಳೆದಾಗ ಯಾವ ಸ್ಥಿತಿ ಇದ್ದಿತ್ತೊ, ಅದೇ ಸ್ಥಿತಿ. ಅಲ್ಲದೆ, ಯಥೇಚ್ಚೆಯಾಗಿ ಕೆಲಸ ಮಾಡುತ್ತಿದ್ದ ಕೆಳಗಿನ ವೃತ್ತಿಗಳು, ಉನ್ನತವಾದ ಪ್ರಜ್ಞೆಯ ಆಧೀನದಲ್ಲಿ ಬರುವುದು. ಆದ್ದರಿಂದ ಕೆಳಗಿನ ವೃತ್ತಿಗಳು, ದೈವೀ ಕೇಂದ್ರದ ಪರದಿಯಲ್ಲಿ ಬರುವುದು. ಈ ರೀತಿಯಾಗಿ ಒಟ್ಟು ಮಾನವನ ಅಸ್ತಿತ್ವವು ದೈವಿಕೃತವಾಗುವುದು.
ಬಾಬೂಜಿಯವರು ಅವರ ಗುರುಗಳ ಹೆಸರಿನಲ್ಲಿ, 1945 ಮಾರ್ಚಿ 31 ನೇ ತಾರೀಖು ಷಾಜಹಾನ್‌ಪುರ (ಉ.ಪ್ರ.), ದಲ್ಲಿ ಶ್ರೀ ರಾಮಚಂದ್ರಮಿಷನ್ನನ್ನು ಸ್ಥಾಪಿಸಿದರು. ಇದು ನಿಧಾನವಾಗಿ ಸತ್ಯಾನ್ವೇಷಕರನ್ನು ಎಲ್ಲೆಡೆಯಿ೦ದ ಆಕರ್ಷಿಸಲಾರಂಭಿಸಿತು.
ನಿಸರ್ಗದ ಕಾರ್ಯ ನಿರ್ವಹಿಸುವ ಉದ್ದೇಶದಿಂದ ಈ ಭೂಮಿಯ ಮೇಲೆ ಅವತರಿಸಿದಂಥಹ ‘ವಿಶಿಷ್ಟ ವಿಭೂತಿ ಪುರುಷ’ ರಾದ ಶ್ರೀ ರಾಮಚಂದ್ರಜಿ ಮಹರಾಜರು ಷಾಜಹಾನ್‌ಪುರ್ (ಉ.ಪ್ರ.), ತಮ್ಮ ದೈವಿ ಪ್ರೀತಿಯಿಂದ ಇಡೀ ಮಾನವಕುಲಕ್ಕೆ ಸೇವೆಸಲ್ಲಿಸಿದರು. ಅಲ್ಲದೆ ಆಧ್ಯಾತ್ಮದ ಶಿಕ್ಷಣದಲ್ಲಿನ ನೈಪುಣ್ಯತೆಯಿಂದ ನಿಜವಾದ ಸತ್ಯಾನ್ವೇಷಕರಿಗೆ, ಮಾನವ ಜೀವನದ ಅಂತಿಮ ಲಕ್ಷ್ಯವನ್ನು ಪ್ರಸಾದಿಸಿ, ಏಪ್ರಿಲ್ 19, 1983 ರಂದು ಅವರು ತಮ್ಮ ಭೌತಿಕ ಶರೀರವನ್ನು ತ್ಯಜಿಸಿದರು.
ಆದರೆ, ಅವರು ಇಂದಿಗೂ, ಎಂದಿಗೂ ಆಧಾತ್ಮದ ಜಿಜ್ಞಾಸುಗಳನ್ನು ಕೈ ಹಿಡಿದು ನಡೆಸುತ್ತಿರುವರಲ್ಲದೆ, ಅವರ ಜೀವನದ ಗುರಿಯಾದ ಸತ್ಯವಸ್ತುವಿನ ಪ್ರಾಪ್ತಿಯನ್ನು ಪ್ರಸಾದಿಸುತ್ತಿರುವರು.